Wednesday, July 24, 2013

ನಮ್ಮದು ಟೂರಿಸಂ ಅಲ್ಲ, ಅದು ಟೆರರಿಸಂ!

I share same sentiment as the Author about the situation :-/



Copyright of Kannadaprabha.com. Copied the text from here  ನೂರೆಂಟು ನೋಟ

ಈ ಸುರಿವ ಮಳೆಯಲ್ಲಿ ಅದೆಂಥ ಆಕರ್ಷಣೆಯಿದೆಯೋ ಗೊತ್ತಿಲ್ಲ.
ಮೊನ್ನೆ ಭಾನುವಾರ ಮುಂಜಾನೆ ಕೆಮರಾವನ್ನು ಹೆಗಲಿಗೇರಿಸಿಕೊಂಡು, ಹೆಂಡತಿ, ಮಗನನ್ನು ಕಟ್ಟಿಕೊಂಡು ಮೇಕೆದಾಟು, ಸಂಗಮ, ಗಾಳಿಬೊರೆ, ಭೀಮೇಶ್ವರಿಗೆ ಹೋಗಿದ್ದೆ. ಬೆಂಗಳೂರಿಗೆ ತಾಕಿಕೊಂಡು, ಬರೀ ಎರಡು ಗಂಟೆ ದೂರದಲ್ಲಿ ಇಂಥದೊಂದು ಸುಂದರ, ರಮಣೀಯ ತಾಣವನ್ನು ನೋಡಿ ಇಪ್ಪತ್ತು ವರ್ಷಗಳೇ ಆಗಿದ್ದವು. ಕಾವೇರಿ ಮೈ ಚಳಿ ಬಿಟ್ಟು, ಯಾರ ಹಂಗು, ಲಗಾಮು ಇಲ್ಲದೇ ಜಬರದಸ್ತಿನಿಂದ ಹರಿಯುತ್ತಿದ್ದಳು. ಹೆಜ್ಜೆ ಹೆಜ್ಜೆಗೆ ಆಕಾರ, ಗಾತ್ರ, ಸ್ವರೂಪ ಬದಲಿಸುತ್ತಾ, ಇಡೀ ಪಾತಳಿಯನ್ನು ಆವರಿಸಿಕೊಂಡು, ಗಜಗಾಂಭೀರ್ಯದಿಂದ ಹರಿಯುತ್ತಿದ್ದರೆ, ಆ ದೃಶ್ಯಗಳನ್ನು ಕಣ್ಣಲ್ಲಿ ತುಂಬಿಕೊಳ್ಳುವುದೇ ಸುಕೃತ, ರಸಾನುಭೂತಿಯ ಪರಾಕಾಷ್ಠೆ. ಗಾಳಿಬೊರೆಯಲ್ಲಿ ಜಂಗಲ್ ಲಾಡ್ಜ್ ಹಾಗೂ ರೆಸಾರ್ಟ್‌ನವರು ಅಭಿವೃದ್ಧಿಪಡಿಸಿದ ತಾಣದಲ್ಲಿ ನಿಂತು ಕಾವೇರಿಯನ್ನು ಕಣ್ಣು ತುಂಬಿಸಿಕೊಳ್ಳುವುದಕ್ಕಿಂತ ಮಹತ್ತರವಾದ ಬೇರೆ ಯಾವ ಕೆಲಸವೂ ಇಲ್ಲ ಎಂದು ಎಂಥವನಿಗಾದರೂ ಅನಿಸದೇ ಇರದು. ಕಾವೇರಿ ನದಿಗುಂಟ ನಾಲ್ಕೈದು ಕಿ.ಮಿ. ಕ್ರಮಿಸುವ ಚಾರಣ ಅನುಭವವನ್ನು ಮನಸ್ಸಿನಲ್ಲಿ ಕ್ಲಿಕ್ಕಿಸಿ, ಫ್ರೇಮ್ ಹಾಕಿಕೊಂಡೇ ನೇತು ಹಾಕಿದರೆ ಜೀವನವಿಡೀ ನೋಡುತ್ತಾ ಆನಂದಿಸಬಹುದು. ಇದೇನು ಉತ್ಪ್ರೇಕ್ಷೆಯ ಮಾತಲ್ಲ ಬಿಡಿ.
ಒಂದೆಡೆ  ಎಡಬಿಡದೆ ಮಳೆ ಜೋರಾಗಿ ಸುರಿಯುತ್ತಿದ್ದರೆ ಕ್ಷಣಕ್ಷಣಕ್ಕೂ ಕಾವೇರಿಯ ರಭಸ ಹೆಚ್ಚುತ್ತಿತ್ತು. ಕಬಿನಿ ಜಲಾಶಯದಿಂದಲೂ ಹೊರಕ್ಕೆ ಹೋಗುವ ನೀರಿನ ಪ್ರಮಾಣ ಏರುತ್ತಲೇ ಇತ್ತು. ಸಂಗಮದಲ್ಲಿ ನದಿಪಾತ್ರವನ್ನೆಲ್ಲ ಆಕ್ರಮಿಸಿಕೊಂಡ ಕಾವೇರಿ, ಮೇಕೆದಾಟು ಹತ್ತಿರ ಬರುತ್ತಿದ್ದಂತೆ ಶಂಖದ ಮೂತಿಯಂಥ ಬಂಡೆಗಲ್ಲಿನೊಳಗೆ ತೂರಿ ರಭಸದಿಂದ ಧುಮ್ಮಿಕ್ಕಿ ನೆಗೆಯುತ್ತಿದ್ದರೆ ಬಗೆಬಗೆಯ ದೃಶ್ಯ ಕಾವ್ಯಗಳ ಅನಾವರಣಕ್ಕೆ ಅವಕಾಶಗಳು ತೆರೆದುಕೊಳ್ಳುತ್ತಿದ್ದವು. ಮೇಕೆದಾಟು ಹಾಗೂ ಸಂಗಮದ ಫೋಟೋ ಫ್ರೇಮು ನನ್ನ ಮನಸ್ಸಿನಲ್ಲಿ ಇನ್ನೂ ನೇತಾಡುತ್ತಲೇ ಇದೆ. ಈ ಅನುಭವ ನಿಮ್ಮದೂ ಆಗಿದ್ದಿರಬಹುದು.
ನಾನು ನಿಮಗೆ ಹೇಳಬೇಕೆಂದಿರುವುದು ಬೇರೆ ವಿಷಯ. ಮೊನ್ನೆ ನಾನು ಈ ಎಲ್ಲ ತಾಣಗಳಿಗೆ ಹೋದಾಗ ಈ ಎಲ್ಲ ದೃಶ್ಯ, ಅನುಭವವನ್ನು ಹಿಂಡಿ ಹಿಪ್ಪಲಿ ಮಾಡಿ ಒಂದೆಡೆ ಬಿಸುಟು ಹಾಕಿ, ಮತ್ತೊಂದು ವಿಕಾರ, ವಿಕೃತಿ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿಲ್ಲುವಂತೆ ಮಾಡಿದ ಘಟನೆಗಳ ಬಗ್ಗೆ ಸಹ ಹೇಳಬೇಕು. ಇಲ್ಲದಿದ್ದರೆ ಆ ಕಹಿ ಘಟನೆ ಎಲ್ಲರಿಗೂ ಆಗಬಹುದು. ಕನಕಪುರ, ಸಾತನೂರು ದಾಟಿ ಸಂಗಮದ ಕಡೆ ಹೊರಟಿದ್ದರೆ, ಆ ಭಾನುವಾರ ಅಸಂಖ್ಯ ವಾಹನಗಳು ಅದೇ ಮಾರ್ಗದಲ್ಲಿ ಚಲಿಸುತ್ತಿದ್ದವು. ಕೆಲವು ವಾಹನಗಳಲ್ಲಿ ಯುವಕ, ಯುವತಿಯರಿದ್ದರು. ಬೈಕ್‌ನಲ್ಲಿ ಹೊರಟವರೂ ಸಾಕಷ್ಟಿದ್ದರು. ಇನ್ನೂ ಮಧ್ಯಾಹ್ನದ ಸೂರ್ಯ ನೆತ್ತಿಗೇರಿರಲಿಲ್ಲ. ಆದರೆ ಅನೇಕರು ಏರಿಸಿಕೊಂಡಿದ್ದು ಮಾತ್ರ ನೆತ್ತಿಗೇರಿತ್ತು.
ಸಂಗಮದಲ್ಲಿ ಪುಟ್ಟ ವೃತ್ತಾಕಾರದ ದೋಣಿಯಲ್ಲಿ (coracle) ಕುಳಿತು ಕಾವೇರಿ ನದಿಯನ್ನು ದಾಟಿ ಮೇಕೆದಾಟಿಗೆ ಹೋಗಲು ಬಸ್ಸನ್ನೇರಿದರೆ 'ಘಮ್‌' ಎಂಬ ಗುಂಡಿನ ಘಮಘಮ. ಮೇಕೆದಾಟಿಗೆ ಬಂದಿಳಿದರೆ, ಧಾರೆಯಾಗಿ ಹರಿಯುವುದು ಕಾವೇರಿಯೋ, ಮದ್ಯವೋ ಎಂಬ ಸಂದೇಹ ಎಂಥವನಿಗಾದರೂ ಬರಬಹುದು. ಬಂಡೆಗಲ್ಲು, ಪಕ್ಕದ ಕಾಡು, ನದಿತಟದುದ್ದಕ್ಕೂ ಅಲ್ಲಲ್ಲಿ ಏಳೆಂಟು ಜನರಿರುವ ಗುಂಪು ಗುಂಡು ಹಾಕುವುದರಲ್ಲಿ ನಿರತವಾಗಿತ್ತು. ಅಲ್ಲಿಯೇ ಮಾಂಸ ಬೇಯಿಸಿ ತಿನ್ನುವ ಚಪಲ.
ಹೀಗಾಗಿ ಬಂಡೆಗಲ್ಲಿನ ಮೇಲೆಲ್ಲ ಪಾಕಶಾಲೆ. ಎಲ್ಲರ ಕೈಯಲ್ಲೂ ಬಾಟಲಿ ಇಲ್ಲವೇ ಮದ್ಯದ ಗ್ಲಾಸು, ಮತ್ತೊಂದು ಕೈಯಲ್ಲಿ ಮೂಳೆ. ಬಾಯ್ತುಂಬಾ ಕೇಕೆ, ಗದ್ದಲ. ಕೆಲವರಂತೂ ಖಾಲಿ ಮಾಡಿದ ಬಾಟಲಿಯನ್ನು ನದಿಗೆಸೆಯುತ್ತಿದ್ದರು. ಇನ್ನೂ ಕೆಲವರು ಮೇಲಿಂದ ಕೆಳಗಿನ ಬಂಡೆಗೆ ಎಸೆಯುತ್ತಿದ್ದರು. ಬಾಟಲಿ ಒಡೆಯುವ ಸದ್ದಿಗೆ ಮತ್ತಷ್ಟು ಪ್ರೇರಿತರಾಗಿ ಉಳಿದವರೂ ಎಸೆಯುತ್ತಿದ್ದರೆ 'ಠಳ್ ಠಳ್‌' ಎಂಬ ಸದ್ದಿನ ಅನುರಣನ. ಗುಂಪಿನಲ್ಲಿ ಹುಡುಗಿಯರಿದ್ದರೆ ಮತ್ತಷ್ಟು ಜೋಕು. ಅಕ್ಕಪಕ್ಕದಲ್ಲಿ ಸಹ ಪ್ರವಾಸಿಗರಿದ್ದಾರೆಂಬ ಪರಿವೆಯೇ ಇಲ್ಲ. ಅವರಿಗೆ ಎಷ್ಟೇ ತೊಂದರೆಯಾದರೂ ಪರವಾಗಿಲ್ಲ, ತಾವು ಎಂಜಾಯ್ ಮಾಡಬೇಕೆಂಬ ವಾಂಛೆ. ಇಡೀ ಪರಿಸರ 'ಬಯಲು ಬಾರ್‌' ಆಗಿ ಪರಿವರ್ತನೆಯಾಗಿತ್ತು. ಅಲ್ಲಿ ಸಂಭಾವಿತರೆನಿಸಿಕೊಂಡವರಿಗೆ ಹತ್ತು ನಿಮಿಷ ಕಳೆಯಲು ಆಗುತ್ತಿರಲಿಲ್ಲ. ಮೇಲಿನಿಂದ ನಿಂತು ಕಾವೇರಿಯ ರಭಸವನ್ನು ವೀಕ್ಷಿಸಲೆಂದು ಬಂಡೆ ಏರುತ್ತಿದ್ದರೆ ಹೆಜ್ಜೆ ಹೆಜ್ಜೆಗೂ ಒಡೆದ ಬಾಟಲಿಯ ಚೂರುಗಳು. ಬೂಟಿನೊಳಗೆ ತೂರಿಬಂದ ಗ್ಲಾಸಿನ ಚೂರಿನಿಂದ ಚುಚ್ಚಿಸಿಕೊಂಡ ಹುಡುಗನೊಬ್ಬನ ಮುಖದಲ್ಲಿ ಕಣ್ಣೀರಧಾರೆಯನ್ನು ನೋಡಲಾಗುತ್ತಿರಲಿಲ್ಲ. ಅದನ್ನು ನೋಡಿಯೂ ಆ ಪಡಪೋಶಿಗಳು ಕುಡಿದು ಖಾಲಿ ಮಾಡಿದ ಬಾಟಲಿಯನ್ನು ಬಂಡೆಗಲ್ಲಿನ ಮೇಲೆ ಎಸೆಯುತ್ತಿದ್ದರು. ಬೇಯಿಸಿದ ಮಾಂಸ, ಉಂಡು ಎಸೆದ ಬಾಳೆ ಎಲೆ, ಪ್ಲಾಸ್ಟಿಕ್ ಪ್ಲೇಟು, ಬಿಯರ್ ಬಾಟಲಿ, ನೀರಿನ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನೆಲ್ಲ ಹರಡಿ ಆ ಸುಂದರ ಪರಿಸರವನ್ನು ಹಾಳುಗೆಡವಿ 'ಎಂಜಾಯ್‌' ಮಾಡುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.
ಆನಂತರ ಕೆಟ್ಟ ದನಿಯಲ್ಲಿ ಕಿರುಚುವುದು, ಕೇಕೆ ಹಾಕುವುದು, ಶಿಳ್ಳೆ ಹೊಡೆಯುವುದು, ಜೋರಾಗಿ ಮ್ಯೂಸಿಕ್ ಹಚ್ಚಿಕೊಂಡು ಡಾನ್ಸ್ ಮಾಡುವುದು... ನಡೆದೇ ಇತ್ತು. ಇಡೀ ದಿನ ಕಳೆಯಬಹುದಾದ ಆ ಮನೋಹರ ತಾಣದಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಳೆಯಲು ಸಾಧ್ಯವೇ ಇರಲಿಲ್ಲ. ಅದರಲ್ಲೂ ಹೆಂಗಸರು, ಮಕ್ಕಳ ಜತೆ ಅಲ್ಲಿ ನಿಲ್ಲುವುದೇ ಸಭ್ಯತೆಗೆ ಅಪಚಾರ ಹಾಗೂ ಅಪಾಯ. ಮೇಕೆದಾಟು ಮುಗಿಸಿ ಪುನಃ ಸಂಗಮದ ಕಡೆ ಬಂದರೆ ಎಲ್ಲೆಡೆಯೂ ಇದೇ ದೃಶ್ಯ. ಕುಡಿದು, ತಿಂದು ಅಲ್ಲಿಂದ ಜಾಗ ಖಾಲಿ ಮಾಡಿದವರು ತಾವಿದ್ದ ತಾಣವನ್ನು ಗಬ್ಬೆಬ್ಬಿಸಿ ಹೊಲಸು ಮಾಡಿ ಹಾಗೇ ಹೊರಟು ಹೋಗುತ್ತಿದ್ದರು. ಕೆಲವರಂತೂ ಅವೆಲ್ಲವನ್ನೂ ನೀರಿಗೆ ಎಸೆಯುತ್ತಿದ್ದರು. ಆ ಇಡೀ ಪರಿಸರ ಈ ಎಲ್ಲ ಹೊಲಸುಗಳಿಂದ ಅಸಹನೀಯ ಎಂದೆನಿಸುತ್ತಿತ್ತು. ಇದೇನಾ ಎಂಜಾಯ್‌ಮೆಂಟು? ಇದೆಂಥಾ ಎಂಜಾಯ್‌ಮೆಂಟು? ಇದೇನಾ ಪ್ರವಾಸೋದ್ಯಮ? ಇದೆಂಥ ವಿಕೃತಿ? ಅನಾಚಾರ?
ಇದು ಬರೀ ಮೇಕೆದಾಟು, ಸಂಗಮ, ಭೀಮೇಶ್ವರಿ ಕತೆಯಲ್ಲ. ಅಲ್ಲಿಗೆ ಹೋದಾಗ ಮಾತ್ರ ನಮ್ಮ ಜನ ಈ ರೀತಿ ಹುಚ್ಚು ಅತಿರೇಕಿಗಳಂತೆ ವರ್ತಿಸುವುದಿಲ್ಲ. ಎಲ್ಲ ಕಡೆಯೂ ಇದೇ ಗೋಳು. ಇದೇ ಕಥೆ, ಇದೇ ವ್ಯಥೆ. ನಮ್ಮದು ಟೂರಿಸಂ ಅಲ್ಲವೇ ಅಲ್ಲ. ಇದು ಒಂಥರಾ ಟೆರರಿಸಂ! ಈ ಕುಡುಕರನ್ನು ಪ್ರವಾಸಿಗರು ಎಂದು ಹೇಗೆ ಕರೆಯುವುದು? ಯಾಕೆಂದರೆ ಪ್ರವಾಸಿಗರಾಗಿ ಬಂದವರ್ಯಾರೂ ಈ ರೀತಿ ವರ್ತಿಸುವುದಿಲ್ಲ. ಈ ಕುಡುಕರಿಗೆ ಕುಡಿಯಲು ಹೊಸ ತಾಣಬೇಕು, ಅದಕ್ಕಾಗಿ ಆಗಾಗ ಈ ಪ್ರವಾಸಿತಾಣಗಳಿಗೆ ಬರುತ್ತಾರೆ. ಕುಡಿಯುವುದೇ ಇವರ ಪರಮ ಧ್ಯೇಯೋದ್ದೇಶವಾದರೆ ಪ್ರವಾಸಿ ತಾಣಗಳಿಗೇಕೆ ಬರಬೇಕು? ಮನೆಯಲ್ಲಿಯೇ ಕುಂತು ಕುಡಿಯಬಹುದಲ್ಲ?
 ವಿಚಿತ್ರ ಹಾಗೂ ಅತ್ಯಂತ ದೌರ್ಭಾಗ್ಯದ ಸಂಗತಿಯೇನೆಂದರೆ, ನಮ್ಮಲ್ಲಿ ಅನೇಕರು ಪ್ರವಾಸವೆಂದರೆ ಕುಡಿಯುವುದಕ್ಕಾಗಿ ಹೋಗುವುದು ಎಂದು ಭಾವಿಸಿದಂತಿದೆ. ಎಂಜಾಯ್‌ಮೆಂಟ್ ಅಂದ್ರೆ ಗುಂಡು ಹಾಕುವುದು ಎಂದೇ ತಿಳಿದಂತಿದೆ. ಪ್ರವಾಸಿ ತಾಣಗಳಿಗೆ ಹೋಗಿ ಗುಂಡು ಹಾಕದೇ ಬರುವುದು ಅಂದ್ರೆ ಅದೂ ಒಂದು ಪ್ರವಾಸವಾ ಎಂದು ನಿರ್ಧರಿಸಿದಂತಿದೆ. ಹೀಗಾಗಿ ನೀವು ಯಾವುದೇ ಪ್ರವಾಸಿ ಕೇಂದ್ರಕ್ಕೆ ಹೋದರೂ ಅಲ್ಲಿ ಕುಡುಕರು ಸಿಕ್ಕೇ ಸಿಗುತ್ತಾರೆ. ಖಾಲಿ ಬಾಟಲಿಗಳು ಎಲ್ಲೆಡೆ ಚೆಲ್ಲಾಪಿಲ್ಲಿ ಬಿದ್ದಿರುತ್ತವೆ.
ಇನ್ನೂ ದೌರ್ಭಾಗ್ಯದ ಸಂಗತಿಯೆಂದರೆ ಇವರೆಲ್ಲರೂ ಪದವೀಧರರು, ಸುಶಿಕ್ಷಿತರು! ಇವರಿಗೆ ಬುದ್ಧಿ ಹೇಳುವವರಾದರೂ ಯಾರು? ಇವರನ್ನು ಪ್ರಶ್ನಿಸುವುದಂತೂ ಆಗದ ಕೆಲಸ. 'ಅಲ್ಲಾರ್ರೀ, ಇದು ಕುಡಿಯುವ ತಾಣ ಅಲ್ಲ. ಬೇರೆಯವರಿಗೆ ಇದರಿಂದ ತೊಂದರೆಯಾಗುತ್ತದೆ' ಎಂದು ಸಣ್ಣ ಪ್ರತಿಭಟನೆಯ ದನಿಯಲ್ಲೋ, ಮನವಿಯ ರೂಪದಲ್ಲೋ ಹೇಳಿದಿರಿ ಅಂತಿಟ್ಟುಕೊಳ್ಳಿ, ನಿಮ್ಮ ಮಾನಸಿಕ ನೆಮ್ಮದಿ ಗಾಳುಮೇಳಾಯಿತು ಅಂತಾನೇ ಅರ್ಥ. 'ನಮಗೆ ಹೇಳೋರು ಯಾರ್ರೀ ನೀವು? ನಾವು ಎಂಜಾಯ್ ಮಾಡಲಿಕ್ಕೆ ಬಂದಿದ್ದೇವೆ. ನಿಮಗೇನು ಕಷ್ಟ?' ಎಂದು ನಿಮ್ಮ ಮೇಲೆ ಎಗರಿ ಬಂದು ಹೈ-ಕೈ ಆಗದಿದ್ದರೆ ಕೇಳಿ.
ಯಾರಿಗೆ ಬೇಕು ಉಸಾಬರಿ ಎಂದು ಸಹ ಪ್ರವಾಸಿಗರ್ಯಾರೂ ಮಾತಾಡದೇ ಈ ಎಲ್ಲ ಅಸಹ್ಯಗಳನ್ನು ಮೂಕರಾಗಿ ಸಹಿಸಿಕೊಂಡು ವಾಪಸ್ ಬರುತ್ತಾರೆ. ಈ ಕುಡುಕರಿಗೆ ಹೊಸ ತಾಣವನ್ನು ತಿಳಿಯುವ, ನೋಡುವ ಆಸ್ಥೆ ಇರುವುದಿಲ್ಲ. ಅವರದ್ದೊಂದೇ ಅಜೆಂಡಾ 'ಎಂಜಾಯ್‌' ಮಾಡುವುದು ಹಾಗೂ ಅದಕ್ಕಾಗಿ ಕುಡಿಯುವುದು ಹಾಗೂ ಅದಕ್ಕಾಗಿ ಪರಿಸರ ಗಬ್ಬೆಬ್ಬಿಸಿ, ಗಲಾಟೆ ಮಾಡುವುದು. ಬೇರೆಯವರಿಗೆ ತೊಂದರೆಯಾದರೂ ಪರವಾಗಿಲ್ಲ, ತಮ್ಮ ಎಂಜಾಯ್‌ಮೆಂಟಿಗೆ ಧಕ್ಕೆ ಆಗಬಾರದು. ಪ್ರವಾಸಿತಾಣಕ್ಕೆ ಬರುತ್ತಿರುವಂತೆ ಗುಂಡಂಗಡಿ ಎಲ್ಲಿದೆಯೆಂದು ಹುಡುಕುತ್ತಾರೆ. ಅದಕ್ಕೆ ಮಾತ್ರ ಗೈಡ್ ಬೇಕು. ಹೀಗಾಗಿ ನಮ್ಮ ಪ್ರವಾಸಿತಾಣಗಳು ಹೆಂಗಸರಿಗೆ ಸುರಕ್ಷಿತವಲ್ಲವೇ ಅಲ್ಲ. (ಈ ಕಾರಣಕ್ಕಾಗಿಯೇ ಇತ್ತೀಚೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಎಲ್ಲ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ ಏರ್ಪಡಿಸಿದ್ದನ್ನು ನೆನಪಿಸಿಕೊಳ್ಳಿ.) ಕುಡಿದು ತೂರಾಡುವ ಪ್ರವಾಸಿಗರೊಂದಿಗೆ ಮಹಿಳೆಯರು ಮುಕ್ತವಾಗಿ ತಿರುಗಾಡುವುದಾದರೂ ಹೇಗೆ? ಈ ಕುಡುಕ ಪ್ರವಾಸಿಗರನ್ನು ನಿಯಂತ್ರಿಸುವವರು ಇಲ್ಲವೇ ಇಲ್ಲ. ಪೊಲೀಸರೂ ಇವರ ಮುಂದೆ ಮೂಕ ಪ್ರೇಕ್ಷಕರು. 'ನಮ್ಮ ದುಡ್ಡಿನಲ್ಲಿ ನಾವು ಕುಡಿದರೆ, ನಾವು ಎಂಜಾಯ್ ಮಾಡಿದರೆ ನಿಮಗೇನು ಸಮಸ್ಯೆ?' ಎಂದು ಕೇಳುವವರಿಗೆ ಪೊಲೀಸ್‌ರಾದರೂ ಏನು ಉತ್ತರ ಕೊಟ್ಟಾರು? 'ಸಾಯಲಿ, ನಮಗೇನು ಬಂತು?' ಎಂದು ಪೊಲೀಸರೂ ಸುಮ್ಮನಾಗುತ್ತಾರೆ. ಕುಡಿದ ಅಮಲಿನಲ್ಲಿ ನೀರಿಗಿಳಿಯುತ್ತಾರೆ, ಗುಡ್ಡವೇರುತ್ತಾರೆ.
ಮೊನ್ನೆ ಮೇಕೆದಾಟಿನಲ್ಲಿ ಹಾಗೇ ಆಯಿತು. ನೀರಿಗಿಳಿಯಲು ಮುಂದಾದ ಕುಡುಕ ಪ್ರವಾಸಿಗನೊಬ್ಬನನ್ನು ಬಸ್ ಕಂಡಕ್ಟರ್ ಕರೆದು ಬುದ್ಧಿ ಹೇಳಿದ. 'ನನಗೆ ಹೇಳಲು ನೀನ್ಯಾರು?' ಎಂಬ ತಿರುಗೇಟು ಬಂತು. ಕಂಡಕ್ಟರ್ ಸುಮ್ಮನಾದ. ಈಜಲು ಹೋದವನು ನೋಡ ನೋಡುತ್ತಿದ್ದಂತೆ ಜಲಸಮಾಧಿಯಾದ. ಸಂಗಮದಲ್ಲಿ ಎಲ್ಲರಿಗೂ ಕಾಣುವಂತೆ ಆಯಾ ವರ್ಷ ಎಷ್ಟು ಜನ ಸತ್ತಿದ್ದಾರೆಂಬ ಅಂಕಿ-ಸಂಖ್ಯೆಗಳಿರುವ ಬೋರ್ಡ್ ನೇತು ಹಾಕಿದ್ದಾರೆ. ಆದರೆ ಸಾಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅವರ ಪೈಕಿ ಹೆಚ್ಚಿನ ಮಂದಿ ಕುಡಿದು ನೀರಿಗಿಳಿದವರೇ. ಪ್ರವಾಸಿ ತಾಣಗಳಲ್ಲಿ ಕಂಡಕಂಡಲ್ಲಿ ರಾಜಾರೋಷವಾಗಿ ಕುಡಿದು ಕುಪ್ಪಳಿಸುವ ಉಪದ್ವ್ಯಾಪಿ, ಪಡಪೋಶಿ ಸುಶಿಕ್ಷಿತ ಪ್ರವಾಸಿಗರನ್ನು ನೆನಪಿಸಿಕೊಂಡರೆ ಯಾರಿಗಾದರೂ ಅಲ್ಲಿಗೆ ಹೋಗುವ ಉಮ್ಮೇದಿಯೇ ಬರುವುದಿಲ್ಲ.
ಇಂಥವರ ಬಗ್ಗೆ ವಿದೇಶಿ ಪ್ರವಾಸಿಗರು ಏನೆಂದು ಭಾವಿಸಬಹುದು? ನಮ್ಮ ಜನ, ರಾಜ್ಯದ ಬಗ್ಗೆ ಎಂಥ ಕಲ್ಪನೆಯನ್ನು ಕಟ್ಟಿಕೊಳ್ಳಬಹುದು? ಕುಡಿಯುವುದಿದ್ದರೆ ಮನೆಯಲ್ಲಿ ಕುಡಿದುಕೊಳ್ಳಲಿ. ಯಾರೂ ಬೇಡೆವೆನ್ನುವುದಿಲ್ಲ. ಆದರೆ ಪ್ರವಾಸಿ ತಾಣಕ್ಕೆ ಬಂದು ಕುಡಿದು, ದುಪಳಿಯೆಬ್ಬಿಸುವ ಪ್ರವಾಸಿಗರನ್ನು ನಿಯಂತ್ರಿಸದಿದ್ದರೆ ಇವರು ಪ್ರವಾಸಿ ತಾಣವೊಂದನ್ನೇ ಅಲ್ಲ, ನಮ್ಮ ಊರು, ರಾಜ್ಯ, ದೇಶದ ಇಮೇಜನ್ನೇ ಮೂರಾಬಟ್ಟೆ ಮಾಡುತ್ತಾರೆ. ಪ್ರವಾಸೋದ್ಯಮ ಅಂದ್ರೆ ಕುಡಿತ ಅಲ್ಲ ಕುಡಿಯುವುದೊಂದೇ ಎಂಜಾಯ್‌ಮೆಂಟ್ ಅಲ್ಲ ಎಂದು ಈ ಮೂರ್ಖ ಶಿಖಾಮಣಿಗಳಿಗೆ ಹೇಳುವುದಾದರೂ ಹೇಗೆ?
ದುರ್ದೈವದ ಸಂಗತಿಯೆಂದರೆ, ಪ್ರವಾಸಿ ತಾಣಗಳಲ್ಲಿ ಕುಡಿಯುವಂತಿಲ್ಲ ಹಾಗೂ ಅಲ್ಲಿನ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನನ್ನೇದಾದರೂ ಜಾರಿಗೊಳಿಸಿದರೆ, ಶೇಕಡಾ ಐವತ್ತರಷ್ಟು ಬಿಜಿನೆಸ್ ಡೌನ್! ಅಂಥ ಸ್ಥಿತಿ ಮುಟ್ಟಿದ್ದೇವೆ. ನಮ್ಮ ಎಲ್ಲ ಪ್ರವಾಸಿ ತಾಣಗಳೂ ಅಸುರಕ್ಷಿತ, ಅಪಾಯಕಾರಿ ತಾಣಗಳಾಗಿ ಪರಿಣಮಿಸಿವೆ.
ನಮ್ಮ ಪ್ರವಾಸಿಗರು ನಮ್ಮ ರಾಜ್ಯದಲ್ಲಿ ಮಾತ್ರ ಹೀಗೆ ವರ್ತಿಸುತ್ತಾರೆಂದು ಭಾವಿಸಬೇಕಿಲ್ಲ. ಎಲ್ಲಿಗೇ ಹೋಗಲಿ, ಅವರು ವರ್ತಿಸುವುದೇ ಹೀಗೆ. ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗೋಲ್ಲ ಅಂತಾರಲ್ಲ, ಹಾಗೆ. ಸ್ವಿಜರ್‌ಲ್ಯಾಂಡಿನಲ್ಲಿ ಭಾರತೀಯ ಪ್ರವಾಸಿಗರು ಅಂದ್ರೆ ಸಾಕು ಮೂಗು ಮುರಿಯುತ್ತಾರೆ. ಎರಡನೆಯ ದರ್ಜೆ ಸೇವೆ ಕೊಡುತ್ತಾರೆ. ಕಾರಣ ನಮ್ಮನ್ನು ಎರಡನೆ ದರ್ಜೆ ವ್ಯಕ್ತಿಗಳಂತೆ ಕಾಣುತ್ತಾರೆ. ಬಹುತೇಕ ಯೂರೋಪಿನ ದೇಶಗಳಲ್ಲಿ ಇದೇ ಪರಿಸ್ಥಿತಿಯಿದೆ. ಬ್ಯಾಂಕಾಕ್, ಕೌಲಾಲಂಪುರ, ಸಿಂಗಾಪುರಗಳಲ್ಲಿ ಭಾರತೀಯ ಪ್ರವಾಸಿಗರೆಂದರೆ ಅಷ್ಟಕಷ್ಟೆ. ಮೇಲ್ನೋಟಕ್ಕೆ ಹಾಗೆ ಅನಿಸದಿರಬಹುದು. ಆದರೆ ಒಳಗೊಳಗೆ ಅಲರ್ಜಿ. ಜಾಗತಿಕ ಪ್ರವಾಸಿ ವರ್ತನೆ ಸೂಚ್ಯಂಕದ ಪ್ರಕಾರ, ಭಾರತೀಯ ಪ್ರವಾಸಿಗನಿಗೆ ನೂರಕ್ಕೆ ಇಪ್ಪತ್ತೇಳು ಅಂಕ. ಬ್ರಿಟಿಶ್ ಪ್ರವಾಸಿಗನಿಗೆ ಎಂಬತ್ತೊಂದು! ಈ ಜಾಗತಿಕ ಪ್ರವಾಸಿಗರ ವರ್ತನೆಯ ವರದಿಯಲ್ಲಿ ಒಂದೆಡೆ, 'ಭಾರತೀಯ ಪ್ರವಾಸಿಗ ಮೂಲತಃ ಗಂಭೀರ ಪ್ರವಾಸಿಗನಲ್ಲ. ಆತನಿಗೆ ಪ್ರವಾಸಿ ತಾಣಗಳನ್ನು ಆಳವಾಗಿ ಅರಿಯುವ ಉತ್ಸುಕತೆ ಇಲ್ಲ. ಪ್ರಮುಖ ಕಟ್ಟಡ, ಪುತ್ಥಳಿ, ಜನಾಕರ್ಷಣೆಯ ಕೇಂದ್ರಗಳ ಮುಂದೆ ನಿಂತು ಫೋಟೋ ತೆಗೆದುಕೊಳ್ಳುವುದಕ್ಕಷ್ಟೇ ಉತ್ಸಾಹ ಸೀಮಿತವಾದಂತಿದೆ. ಅಧ್ಯಯನಶೀಲ ಮನೋಭಾವದ ಪ್ರವಾಸಿಗರು ವಿರಳ. ಒಂದು ತಾಣವನ್ನು ಅರಿಯುವ, ಇತಿಹಾಸ ತಿಳಿಯುವ ಆಸಕ್ತಿ ತೀರಾ ಕಡಿಮೆ. ಇಂಥ ಪ್ರವಾಸಿಗರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯಕರಾಗಲಾರರು. ಇವರು ಬಂದು ಹೋಗುವವರು. ಏರ್‌ಲೈನ್ಸ್ ಹಾಗೂ ಹೋಟೆಲ್‌ಗಳಿಗೆ ಮಾತ್ರ ಇವರಿಂದ ಲಾಭವಾಗಬಹುದು. ಪ್ರವಾಸೋದ್ಯಮ ಎಂಬುದು ಶಿಕ್ಷಣಕ್ಕೆ ಸಮಾನವಾದುದು' ಎಂದು ಉಲ್ಲೇಖಿಸಲಾಗಿದೆ. ನಮಗೆ ಇದಕ್ಕಿಂತ ದೊಡ್ಡ ಮಂಗಳಾರತಿ ಬೇಕಾ?
ಇತ್ತೀಚೆಗೆ ಕೌಲಾಲಂಪುರದಲ್ಲಿ, ನಾನು ಉಳಿದುಕೊಂಡ ಹೋಟೆಲ್ ಮ್ಯಾನೇಜರ್ ಜತೆ ಮಾತಾಡುತ್ತಿದ್ದಾಗ ಆತನ ಅಭಿಪ್ರಾಯ ಕೇಳಿ ಅತೀವ ಬೇಸರವಾಯಿತು. ಆತ ಹೇಳಿದ್ದೇನೆಂದರೆ: ಭಾರತೀಯ ಪ್ರವಾಸಿಗರಿಗೆ ವಿದೇಶಗಳಲ್ಲಿ ಹೇಗೆ ವರ್ತಿಸಬೇಕೆಂಬುದು ಗೊತ್ತಿಲ್ಲ. ತಮ್ಮ ಊರಿನಲ್ಲಿ ಇರುವಂತೆ ಇರುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ದನಿಯಲ್ಲಿ ಮಾತಾಡುತ್ತಾರೆ. ವಿದೇಶಿ ಹುಡುಗ- ಹುಡುಗಿ ಸ್ವಾಭಾವಿಕವಾಗಿ ತಬ್ಬಿಕೊಂಡರೆ, ಚುಂಬಿಸಿದರೆ ಬಾಯಿಬಿಟ್ಟುಕೊಂಡು ದುರುಗುಟ್ಟಿ ನೋಡುತ್ತಾರೆ. ವಿದೇಶಿ ಹುಡುಗಿಯರನ್ನು ಕಣ್ಣರಳಿಸಿಕೊಂಡು ನೋಡುತ್ತಾರೆ. ಬೀಚಿನಲ್ಲಿ ಮಲಗಿರುವ ಮಹಿಳೆಯರ ಹತ್ತಿರ ಹೋಗಲು ಬಯಸುತ್ತಾರೆ. ಅವರ ಫೋಟೋ ಕ್ಲಿಕ್ಕಿಸುತ್ತಾರೆ. ಅವರನ್ನು ನೋಡಿ ಮುಸಿಮುಸಿ ನಗುತ್ತಾರೆ. ವಿದೇಶಿಯರು ವಿಶ್ ಮಾಡಿದರೂ ಪ್ರತಿಯಾಗಿ ವಿಶ್ ಮಾಡೊಲ್ಲ. ಯಾವತ್ತೂ ಟೈಮ್ ಪಾಲಿಸೊಲ್ಲ. ರಸ್ತೆ ಬದಿಯಲ್ಲಿ ಉಗುಳುತ್ತಾರೆ. ಹೋಟೆಲ್ ರೂಮನ್ನು ಗಲೀಜು ಮಾಡಿ ಹೋಗುತ್ತಾರೆ. ಸ್ವಲ್ಪವೂ ಶಿಸ್ತಾಗಿ ಇಟ್ಟುಕೊಳ್ಳುವುದಿಲ್ಲ. ಹೋಟೆಲ್‌ನಲ್ಲಿ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್ ಸೇವಿಸುವಾಗ ಬರಗಾಲ ದೇಶದಿಂದ ಬಂದವರಂತೆ ಮುಕ್ಕುತ್ತಾರೆ. 'ಹಣ ಕೊಟ್ಟಿಲ್ಲವಾ?' ಎಂದು ಹೋಗುವಾಗ ಹಣ್ಣು, ನೀರು ಬಾಟಲಿ ಹಾಗೂ ಇನ್ನಿತರ ತಿಂಡಿ ಪದಾರ್ಥಗಳನ್ನು ಕಟ್ಟಿಕೊಂಡು ಹೋಗುತ್ತಾರೆ. ಬುಫೆ ಟೇಬಲ್ ಮುಂದೆ ಕ್ಯೂ ಉಲ್ಲಂಘಿಸುತ್ತಾರೆ. ಬುಫೆ ಟೇಬಲ್ ಮುಂದೆಯೇ ನಿಂತುಕೊಂಡು ತಿನ್ನಲು ಶುರು ಮಾಡುತ್ತಾರೆ. ಪ್ಲೇಟನ್ನು ಟೇಬಲ್ ಮೇಲೆಯೇ ಬಿಟ್ಟು ಹೋಗುತ್ತಾರೆ. ಹೋಟೆಲ್ ರೂಮಿನಲ್ಲಿಟ್ಟ ಚಮಚ, ಬಿಯರ್ ಓಪನರ್, ಅಲಾರ್ಮ್, ಕೋಸ್ಟರ್, ಟಾವೆಲ್‌ಗಳನ್ನು ಸೂಟುಕೇಸುಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಅಂಗವಿಕಲರಿಗೆ ಮೀಸಲಾದ ಟಾಯ್ಲೆಟ್, ರೆಸ್ಟ್ ರೂಮುಗಳಿಗೆ ನುಗ್ಗುತ್ತಾರೆ. ಕೆಲವೆಡೆ ಮರ್ಯಾದೆ ಬಿಟ್ಟು ಬಾರ್ಗೇನ್ ಮಾಡುತ್ತಾರೆ. ವಿಮಾನದಲ್ಲೂ ಪ್ಲೇಟು, ಸ್ಪೂನ್‌ಗಳನ್ನು ಎಗರಿಸುತ್ತಾರೆ. ಅಪರಿಚಿತರೊಂದಿಗೆ ಹೇಗೆ ವರ್ತಿಸಬೇಕೆಂದನ್ನು ಸಹ ತಿಳಿದಿರುವುದಿಲ್ಲ...
ಆತ ಎರಡೂ ಕೆನ್ನೆಗೆ ಫಳೀರ್ ಫಟೀರ್ ಎಂದು ಬಾರಿಸುತ್ತಿದ್ದಾನೆ ಎಂದು ಅನಿಸಲಾರಂಭಿಸಿತು. ಆತ ಹೇಳಿದ್ದರಲ್ಲಿ ಕೆಲವು ಸಂಗತಿಗಳು ನಿಜವಿದ್ದಿದ್ದರಿಂದ ವಾದ ಮಾಡಲು ಮನಸ್ಸಾಗಲಿಲ್ಲ. ನಮ್ಮ ಬಗ್ಗೆ ಇಂಥ ಭಾವನೆಯಂತೂ ಇರುವುದು ಸತ್ಯ!
ಅವರ ಕಣ್ಣಲ್ಲೂ ನಾವು ಟೂರಿಸ್ಟ್‌ಗಳಲ್ಲ... ಟೆರರಿಸ್ಟ್‌ಗಳು! ಛೇ!


- ವಿಶ್ವೇಶ್ವರ ಭಟ್
vbhat@me.co
m